ಕಾಡು ಓಮ

  ಚೀನೋಪೋಡಿಯೋಸೀ ಕುಟುಂಬಕ್ಕೆ ಸೇರಿದ ಪುಟ್ಟಗಾತ್ರದ ಮೂಲಿಕೆ ಸಸ್ಯ ಇದಕ್ಕೆ ಚೀನೋಪೋಡಿಯಮ್ ಆಂಬ್ರೊಸಾಯ್ಡಿಸ್ ಎಂಬ ವೈಜ್ಞಾನಿಕ ಹೆಸರಿದೆ. ಗಿಡ ಸಾಧಾರಣವಾಗಿ 2 ರಿಂದ 4 ಅಡಿ ಎತ್ತರ ಬೆಳೆಯುತ್ತದೆ. ಕವಲುಗಳು ಹೆಚ್ಚು. ಬಂಗಾಳ ಮತ್ತು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಸಸ್ಯದ ವಿವಿಧ ಭಾಗಗಳ ಮೇಲೆ ವಾಸನಾ ಗ್ರಂಥಿಗಳಿರುವ ಕೂದಲು ಬೆಳೆಯುತ್ತದೆ. ಹೂಗಳು ಎಲೆಯ ಕಂಕುಗಳಲ್ಲಿ ಗುಂಪಾಗಿ ಬೆಳೆಯುತ್ತವೆ; ಇವಕ್ಕೆ ತೊಟ್ಟುಗಳಿಲ್ಲ. ಹೆಣ್ಣಿನ ಮೇಲೂ ಗ್ರಂಥಿಗಳಿಂದ ಕೂಡಿದ ಕೂದಲುಂಟು. ಇದರಿಂದ ಇಡೀ ಸಸ್ಯಕ್ಕೆ ಕರ್ಪೂರದ ವಾಸನೆಯಿದೆ. ಈ ಕೂದಲುಗಳಿಂದ ಒಂದು ರೀತಿಯ ಎಣ್ಣೆಯನ್ನು ತೆಗೆದು ಔಷಧವಾಗಿ ಉಪಯೋಗಿಸುತ್ತಾರೆ.

 ಸಸ್ಯದ ಕಾಂಡ, ಎಲೆ, ಹೂ ಇತ್ಯಾದಿ ಭಾಗಗಳನ್ನು ಬಟ್ಟಿಯಿಳಿಸಿ ಎಣ್ಣೆ ತೆಗೆಯುತ್ತಾರೆ. ಈ ಎಣ್ಣೆ ತೆಳು ಹಳದಿ ಅಥವಾ ಕಿತ್ತಲೆಹಣ್ಣಿನ ಹಳದಿ ಬಣ್ಣದ್ದಾಗಿದೆ. ವಾಸನೆ ಅಷ್ಟು ಹಿತಕರವಲ್ಲ. ಇದಕ್ಕೆ ಕಹಿರುಚಿಯಿದೆ. ಇದನ್ನು ಕರುಳಿನಲ್ಲಿ ಜೀವಿಸುವ ಪರತಂತ್ರ ಜೀವಿಗಳನ್ನು ನಾಶಪಡಿಸಲು, ಎಂಟಮೀಬದಿಂದ ಉಂಟಾಗುವ ಆಮಶಂಕೆ ಗುಣಪಡಿಸಲು ಔಷಧಿಯಾಗಿ ಉಪಯೋಗಿಸುತ್ತಾರೆ. ಈ ಔಷಧಿಯನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಅಧಿಕ ಪ್ರಮಾಣದಲ್ಲಿ ಉಪಯೋಗಿಸಿದರೆ ಮಂಕು ಕವಿಯುವುದು, ವಾಂತಿ, ಕಿವುಡು, ವಿಪರೀತ ನಿದ್ರೆ ಮುಂತಾದ ದುಷ್ಪರಿಣಾಮಗಳಾಗುತ್ತವೆ. ಸಾವು ಸಂಭವಿಸುವುದೂ ಉಂಟು. ಮನುಷ್ಯ ಮಾತ್ರ ಅಲ್ಲದೆ ನಾಯಿ. ಕುದುರೆ, ಬೆಕ್ಕು ಮುಂತಾದ ಪ್ರಾಣಿಗಳಲ್ಲಿರುವ ಕೊಕ್ಕೆ ಹುಳು, ದುಂಡು ಹುಳುಗಳ ಮೇಲೆ ಔಷಧಿಯಾಗಿ ಇದನ್ನು ಉಪಯೋಗಿಸಬಹುದು. ಇದರ ಬಳಕೆ ಈಗ ಅಷ್ಟಾಗಿ ಇಲ್ಲ. ಬೆಳಕು ಬಿದ್ದರೆ ಈ ಎಣ್ಣೆಯಲ್ಲಿರುವ ಆಸ್ಕರಿಡಾಲ್ ಎಂಬ ಅಂಶ ಕಡಿಮೆಯಾಗುತ್ತದಾಗಿ ಈ ಎಣ್ಣೆಯನ್ನು ತಂಪಾಗಿರುವ ಕತ್ತಲೆ ಇರುವ ಜಾಗದಲ್ಲಿ ಶೇಖರಿಸಿಡಬೇಕಾಗುತ್ತದೆ. 

 

(ಬಿ.ಪಿ.ಡಿ.ಎಸ್.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 